ಚಿತ್ರಕಲೆಯ ಬೋಧನೆ-

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಎಳೆಯ ಮಕ್ಕಳಿಗೆ ಶಾಲಾ ಪಠ್ಯಗಳಲ್ಲಿ ಚಿತ್ರಕಲೆಯ ಪಾಠಗಳನ್ನು ಕಡ್ಡಾಯ ಮಾಡಿರುವುದರ ಉದ್ದೇಶ ಅವರಿಗೆ ಅದರ ಮೂಲಭೂತ ಅಂಶಗಳ ಅರಿವು ಅಗತ್ಯ ಎಂಬುದಷ್ಟೇ ಅಲ್ಲ, ಅವರಿಗೆ ಸಂಗೀತ, ನೃತ್ಯ, ಅಭಿನಯ, ವಾಚನಗಳಲ್ಲಿ ಹೇಗೋ ಹಾಗೆ ಚಿತ್ರರಚನೆಯಲ್ಲೂ ಸಹಜವಾದ ಅಭಿರುಚಿ ಇರುವುದರಿಂದ ಆ ಬೋಧನೆಯಿಂದ ಅವರ ಸರ್ವಾಂಗೀಣ ವಿಕಾಸಕ್ಕೆ ಸಹಾಯವಾಗುತ್ತದೆ ಎಂಬುದೂ ಆಗಿದೆ. ಅಲ್ಲದೆ ಇತರ ಪಾಠಗಳಲ್ಲಿ ಬರುವ ಪಶು ಗಿಡಮರ ಹಕ್ಕಿ ಮೊದಲಾದವುಗಳ ಸ್ಥೂಲರೂಪವನ್ನು ಬಿಡಿಸುವುದು, ಜ್ಯಾಮಿತೀಯ ಆಕೃತಿಗಳನ್ನು ರಚಿಸುವುದು ಅವರಿಗೆ ತಿಳಿದಿರಬೇಕು. ಇದನ್ನವರು ಸಮರ್ಪಕವಾಗಿ ನಿರ್ವಹಿಸಬೇಕಾದರೆ ಮೂಲವಸ್ತುವನ್ನು ಅವರು ವಿವರವಾಗಿ ನೋಡಿ ತಿಳಿದಿರಬೇಕಲ್ಲದೆ ಅದರ ಆಕಾರವನ್ನು ಬರವಣಿಗೆಯಲ್ಲಿ ಇಳಿಸುವುದನ್ನು ಅಭ್ಯಾಸಮಾಡಿರಬೇಕಾಗುತ್ತದೆ. ಮುಂದೆ ಚಿತ್ರಕಲಾವಿದರೇ ಆಗಬೇಕೆಂಬುವವರಿಗಂತೂ ಇಂಥ ಪ್ರಾಥಮಿಕ ಪಾಠಗಳಿಂದ ಸಾಕಷ್ಟು ಸಹಾಯ, ಪ್ರಚೋದನೆ, ಪ್ರೋತ್ಸಾಹ ದೊರೆತಂತಾಗುತ್ತದೆ.

   	ಕಪ್ಪುಹಲಗೆ ಮತ್ತು ಸೀಮೆಸುಣ್ಣ, ಸ್ಲೇಟು ಬಳಪ, ಕಾಗದ ಸೀಸದಕಡ್ಡಿ, ರಬ್ಬರು ಇವನ್ನು ಸಕ್ರಮವಾಗಿ ಕೊಟ್ಟು ಚಿತ್ರ ಬರೆಯಲು ಹೇಳಬೇಕು. ಅವು ತಮ್ಮ ಮನಸ್ಸು, ಕೈ ಓಡಿದಂತೆ ಚಿತ್ರರಚನೆ ಮಾಡುತ್ತ, ಸರಿ ಎನಿಸಿದಾಗ ಅಳಿಸುತ್ತ ಮತ್ತೆ ಬರೆಯುತ್ತ ಕಲೆಯನ್ನು ಅಭ್ಯಾಸ ಮಾಡುತ್ತವೆ. ಜಲವರ್ಣ, ತೈಲವರ್ಣ, ಕ್ರೇಯನ್ ಮೊದಲಾದುವನ್ನೂ ಅವರ ಕೈಗೆ ಕೊಡಬಹುದು. ಮೊದಮೊದಲು ಮಕ್ಕಳು ಕೈ ಮೈ ಮಸಿ ಮಾಡಿಕೊಂಡರೂ ಕ್ರಮೇಣ ಅವನ್ನು ಸರಿಯಾಗಿ ಉಪಯೋಗಿಸುವುದನ್ನು ಕಲಿಯುತ್ತವೆ.

  	ಒಂದು ದೃಷ್ಟಿಯಿಂದ ಚಿತ್ರಕಲೆ ಕೇವಲ ಕಲಾವಿಜ್ಞಾನದ ವಿಷಯವಾಗದೆ ಬುದ್ಧಿಯ ಬೆಳವಣಿಗೆಗೂ ಶಿಕ್ಷಣಕ್ಷೇತ್ರದಲ್ಲಿಯ ವಿವಿಧ ವಿಷಯಗಳ ಪರಿಜ್ಞಾನಕ್ಕೂ ಸಾಧಕವಾಗಿದೆ.

   	ಚಿತ್ರಬಿಡಿಸುವುದು ಮಕ್ಕಳಿಗೆ ಬಹು ಪ್ರಿಯವಾದ ಒಂದು ಹವ್ಯಾಸ. ಅದರಿಂದ ಅವುಗಳ ಬೇಸರ ಕಳೆಯುತ್ತದೆ. ಅದು ಒಂದು ಉಪಯುಕ್ತ ಕೆಲಸವಾಗಿರುವುದರಿಂದ ಅದನ್ನು ಮಾಡಿ ಮುಗಿಸಿದಾಗ ಮಕ್ಕಳಿಗೆ ಒಂದು ಬಗೆಯ ತೃಪ್ತಿ ಸಿಗುತ್ತದೆ. ಚಿತ್ರ ಬರೆಯುವ ಎಲ್ಲಮಕ್ಕಳೂ ಚಿತ್ರಕಾರರಾಗಲು ಸಾಧ್ಯವಿಲ್ಲ. ಅನೇಕ ಮಕ್ಕಳಿಗೆ ವರ್ಷಗಟ್ಟಲೆ ಅಬ್ಯಾಸಮಾಡಿದರೂ ಸುಲಭವಾದ ಚಿತ್ರಗಳನ್ನೂ ಕೂಡ ಸ್ಥೂಲವಾಗಿ ಬರೆಯುವ ಕಲೆ ಸಿದ್ಧಿಸಿರುವುದಿಲ್ಲ. ಚಿತ್ರ ಹಾಗಿರಲಿ, ಅಕ್ಷರಗಳನ್ನು ಕೂಡ ಅವರು ನೆಟ್ಟಗೆ ಬರೆಯಲಾರರು. ಆದರೆ ಇತರರು ಬಹು ಬೇಗ ಚಿತ್ರ ಕಲೆಯಲ್ಲಿ ತಮಗಿರುವ ಸಹಜ ಪ್ರವೃತ್ತಿಯನ್ನು, ಪ್ರತಿಭೆಯನ್ನು ತೋರಗೊಡುತ್ತಾರೆ. ಅಂಥವರನ್ನು ಗುರುತಿಸಿ ಅವರಿಗೆ ಈ ಕಲೆಯನ್ನು ಸಾಕಷ್ಟು ಪರಿಶ್ರಮ ಒದಗುವಂತೆ ಮಾಡುವುದು ಉಪಾಧ್ಯಾಯರ ಹಾಗೂ ಪೋಷಕರ ಜವಾಬ್ದಾರಿ.

  	 ಮಕ್ಕಳು ಚಿತ್ರಕಲೆಯನ್ನು ಅಭ್ಯಾಸಮಾಡಿ ದೊಡ್ಡ ಚಿತ್ರಕಲಾವಿದರಾಗುವ ಮಾತು ಹಾಗಿರಲಿ, ಮಕ್ಕಳದ್ದೇ ಒಂದು ಚಿತ್ರಕಲಾ ಸಂಪ್ರದಾಯವಿದೆ ಎಂಬುದು ಈಚಿನ ತಜ್ಞರ ಅಭಿಪ್ರಾಯ. ಆ ಕಲೆಯನ್ನು ಗುರುತಿಸಿ ಅದನ್ನು ಪ್ರೋತ್ಸಾಹಿಸಲು ಅನೇಕ ಸಂಸ್ಥೆಗಳು ಕೆಲಸಮಾಡುತ್ತಿವೆ. ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಜೂನಿಯರ್ ಚೇಂಬರ್‍ಅಸೋಸಿಯೇಷನ್ ಮುಂತಾದ ಸಾರ್ವಜನಿಕ ಸಂಘಸಂಸ್ಥೆಗಳು ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಗಳನ್ನು ಆಗಾಗ್ಗೆ ಏರ್ಪಡಿಸುತ್ತವೆ. ಸ್ಪರ್ಧೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಬಹುಮಾನಗಳನ್ನು ಕೊಡುವುದೂ ಉಂಟು. ಈ ಬಗ್ಗೆ ದೆಹಲಿಯ ಶಂಕರ್ಸ್ ವೀಕ್ಲಿ ವಾ ಪತ್ರಿಕೆಯವರು ಪ್ರತಿ ವರ್ಷವೂ ನಡೆಯುತ್ತಿರುವ ಜಾಗತಿಕ ಮಕ್ಕಳ ಚಿತ್ರಕಲಾ ಸ್ಪರ್ಧೆ ವಿಶೇಷ ಖ್ಯಾತಿಯದಾಗಿದೆ. ಆ ಸಂಸ್ಥೆ, ಪ್ರತಿವರ್ಷವೂ ಬಹುಮಾನ ಪಡೆದ ಚಿತ್ರಗಳ ವಿಶೇಷ ಸಂಚಿಕೆಯನ್ನೂ ಪ್ರಕಟಿಸುತ್ತದೆ.
 
 	ಮಕ್ಕಳ ಚಿತ್ರಗಳಲ್ಲಿ ಸೌಂದರ್ಯವನ್ನು ಗಮನಿಸದೆ ಅವುಗಳಲ್ಲಿ ಅಡಗಿರುವ ಭಾವ, ವಿಚಾರ, ಚೇತನ ಇತ್ಯಾದಿಗಳಿಗೆ ಮೊದಲು ಗಮನ ನೀಡಿ ಪ್ರೋತ್ಸಾಹಿಸಬೇಕು. ಶಿಶುಚಿತ್ರಗಳಂತೆ, ಜೈಮನಿರಾಯ್, ಪಾವುಲ್ ಕ್ಲೀ, ಮ್ಯಾಟನ್ಸೆ, ಪಿಕಾಸೊ ಮೊದಲಾದ ಖ್ಯಾತ ಕಲಾವಿದರು ಮಕ್ಕಳಂತೆ ಚಿತ್ರರಚನೆ ಮಾಡಲು ಆಶಿಸಿದರು ಎಂಬುದನ್ನು ಇಲ್ಲಿ ನೆನೆಯಬಹುದು. 

   	ಶಿಶುವಿಹಾರಗಳಲ್ಲಿನ ಮಕ್ಕಳಿಗೆ ಬೋಧನೆ ಆಕರ್ಷಕವಾಗುವುದು ಚಿತ್ರಗಳ ಮೂಲಕ. ಆದ್ದರಿಂದ ಶಿಶುವಿಹಾರ ಮತ್ತು ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಚಿತ್ರಕಲೆಯ ಬೋಧನೆ ಅತಿ ಮಹತ್ತ್ವದ್ದೆನಿಸಿದೆ. ಅಲ್ಲೆಲ್ಲ ವಿದ್ಯಾಭ್ಯಾಸದ ಅಂಗವಾಗಿ ಚಿತ್ರಕಲೆಗೆ ಯೋಗ್ಯಸ್ಥಾನ ಕಲ್ಪಿಸಿಕೊಡುವ ಸರ್ಕಾರದ ಉದ್ದೇಶ ಸ್ತುತ್ಯವಾದುದು. ಕೇಂದ್ರಸರ್ಕಾರದ ಆದೇಶದಂತೆ ಚಿತ್ರಕಲಾಭಿವೃದ್ಧಿಯ ಬಗೆಗೆ ಸಲಹೆ ನೀಡಲು ನೇಮಕವಾದ ಸಮಿತಿ 1967ರಲ್ಲಿ ತನ್ನ ಅಭಿಮತವನ್ನು ಮಂಡಿಸಿತು. ಆ ಸಲಹೆಗಳನ್ನು ಅನೇಕ ಕಡೆ ಕಾರ್ಯರೂಪಕ್ಕೆ ತರಲಾಗಿದೆ. 
 
  	ಚಿತ್ರಕಲಾ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಪ್ರಗತಿಯನ್ನು ಸಾಧಿಸುವುದಕ್ಕಾಗಿ ಇಂದು ಮಹಾರಾಷ್ಟ್ರ ಸರ್ಕಾರದವರು ಚಿತ್ರಕಲಾ ಶಿಕ್ಷಣಕ್ಕಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿದ್ದಾರೆ. ಕರ್ನಾಟಕ ಸರ್ಕಾರ ತಕ್ಕ ಮಟ್ಟಿಗೆ ಚಿತ್ರಕಲೆಗೆ ಪ್ರೋತ್ಸಾಹ ನೀಡುತ್ತಲಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಪಾಠ್ಯಗಳಲ್ಲಿ ಚಿತ್ರಕಲೆಯನ್ನು ಸೇರಿಸಲಾಗಿದೆ. ವಿಶೇಷ ತರಬೇತಿಯ ಉಚ್ಚಕಲಾ ಪರೀಕ್ಷೆಗಳನ್ನೂ ನಡೆಸಲಾಗುತ್ತಿದೆ. ಸರ್ಕಾರಿ ವಲಯದಲ್ಲಿ ಕಲೆ ಮತ್ತು ಕುಶಲ ಕೈಗಾರಿಕಾ ತರಬೇತಿ ಕೇಂದ್ರಗಳು ಮೈಸೂರು ಮತ್ತು ದಾವಣಗೆರೆಗಳಲ್ಲಿರುವುವಲ್ಲದೆ, ಖಾಸಗಿ ವಲಯದಲ್ಲೂ 13 ಉಚ್ಚಕಲಾಶಾಲೆಗಳಿವೆ. ಕರ್ನಾಟಕ ವಿಶ್ವವಿದ್ಯಾಲಯ ಕಲಾ ಶಿಕ್ಷಣಕ್ಕೆ ವಿಶೇಷ ಮಹತ್ತ್ವನೀಡಿ ಪದವಿ ಪರೀಕ್ಷೆಗೆ ಅದನ್ನು ಒಂದು ವಿಷಯವಾಗಿ ಆಯ್ದಿದೆ.			(ಆರ್.ಜಿ.ಆರ್.ಎ.)